ಸಾವಯವ ಸುಪಾರಿ
- ಜಿ.ಕೆ.ರವೀಂದ್ರಕುಮಾರ್
- Apr 21, 2024
- 1 min read
Updated: Jun 25, 2024
ಕೊಲ್ಲಲು ದುಡ್ಡು ಕೊಟ್ಟರೆ ಸುಪಾರಿ
ಕೊಲ್ಲುವ ಕಥೆಗೆ ದುಡ್ಡು ಕೊಟ್ಟರೆ ಪ್ರಾಯೋಜನೆ
ಕಥೆ ನೋಡಿ ಸುಮ್ಮನಿದ್ದರೆ ಮನರಂಜನೆ
ಕೊಲ್ಲಲು ತೀರ್ಮಾನಿಸಿದರೆ ಅಪರಾಧ
ಇಂಥ ಕೆಲಸ ಮಾಡುವಾಗ ಮನಸ್ಸಿನೊಳಗೆ
ಸುಪಾರಿಯೂ ಪ್ರಾಯೋಜನೆಯೂ ಒಂದರೊಳಗೊಂದು ಸೇರಿ
ನಾನು ಅದೇ ಆಗಿರಲಿಕ್ಕಿಲ್ಲ ಎಂದು ಸಮಾಧಾನ ಪಟ್ಟುಕೊಳ್ಳುವಲ್ಲಿ
ಒಳ್ಳೆಯವನಾಗಿದ್ದವನು ಒಳ್ಳೆಯವನಾಗೇ ಉಳಿಯುವ
ಅಚಲ ನಿಷ್ಠೆ ಕಠಿಣ ತಪಸ್ಸು ಕೆಡಿಸುವಂತೆ
ಸದಾ ನುಗ್ಗುವ ಬ್ರೇಕಿಂಗ್ ನ್ಯೂಸ್
ಹತ್ಯೆ ಹಾದರ ವಂಚನೆ ನೋಡುತ್ತ ಕೇಳುತ್ತಲೂ
ಒಳ್ಳೆಯವನಾಗಿರುವುದೆಂದರೆ ಸುಲಭದ ಮಾತಲ್ಲ
ಇತ್ತೀಚೆಗೆ ಅಹಿಂಸೆ ತಲೆಯೆತ್ತಿ ಮಾತನಾಡುತ್ತಿಲ್ಲ
ಸುಮ್ಮನಿದ್ದರೂ ಏನೊ ಬೇಗುದಿ ಯಾಕೋ
ಮಗ್ಗುಲು ಮುರಿಯುವ ಬಯಕೆ ಬೇಡವೆಂದರೂ
ಬಾಯಿ ಬಿಟ್ಟರೆ ಮಾನನಷ್ಟ ಬಿಡದಿದ್ದರೆ ಮಾನವಂತ
ಹೋಗಿ ಬೆನ್ನು ತಟ್ಟಿ ಬಂದರೆ ಹಾರ್ದಿಕತೆ
ಕೂತೇ ಲೈಕ್ ಮಾಡಿದರೆ ಯಾವುದೋ ಸೆಕ್ಷನ್ನು
ಯೋಗ್ಯರೋ ಅಯೋಗ್ಯರೋ
ಮುಖಕ್ಕೆ ಮಸಿ ಬೀಳುವವರೆಗೆ ಎಲ್ಲರೂ ತತ್ತ್ವಮಸಿಯೇ
ಸಂತೆಯಲ್ಲಿ ಜವಾರಿ ಕೊತ್ತುಂಬರಿ ಸಾವಯವ ತರಕಾರಿ
ಕೊಂಡು ಮನೆಗೆ ಹೋಗುವಾಗ
ಹೀಗೆ ಏನೇನೋ ಆಲೋಚನೆ
ಸಧ್ಯ ನಾನೂ ಜವಾರಿ ಸಾವಯವ
ಇಚ್ಚಿತ ಇಳುವರಿಯ ಕಳ್ಳು ಬಳ್ಳಿ
ಅಲ್ಲಿ ಇಲ್ಲಿ ದಾರಿಮಾಡಿಕೊಂಡು ಹಬ್ಬಿ
ಹೀಗೇ ತಿನ್ನುವ ಮೊದಲು ಸ್ವಲ್ಪ ಸಾಧಕ ಬಾಧಕ ಚಿಂತನೆ
ತುಪ್ಪ ತಟ್ಟೆಗೆ ಬೀಳುವುದೇ ತಡ..
ಇರಲಿ ಯಾಕೆ ಅದೂ ಇದೂ
ಊಟ ಆಯಿತಲ್ಲ ಬಿಡಿ
ಈಗೇನಿದ್ದರೂ ಪಾನು ಸುಪಾರಿ
ಇನ್ನು ನೀವು ಯಾರೋ ನಾವು ಯಾರೋ
ಮುಂದೆ ಅಗತ್ಯ ಬಿದ್ದರೆ ಹೇಗೂ
ನಿಮ್ಮ ಹೆಸರು ನಮ್ಮ ಮನದಲ್ಲಿದೆ
ನಮ್ಮ ಹೆಸರು ನಿಮ್ಮ ಮನದಲ್ಲಿದೆ
ಚಿಂತೆ ಯಾಕೆ ಎಲ್ಲವೂ ತೆರೆದ ಅಂಚೆ
-ಜಿ.ಕೆ. ರವೀಂದ್ರಕುಮಾರ್
Kommentare