ಒಂದು ಕವಿತೆಯ ಪ್ರೊಮೋ
- ಜಿ.ಕೆ.ರವೀಂದ್ರಕುಮಾರ್
- Apr 21, 2024
- 1 min read
Updated: Jun 25, 2024
ಕಥೆ ಸಾಗಬೇಕಾದರೆ ಒಮ್ಮೆ ಸಾಬೂನು ತಿಕ್ಕಿ ಕೋಲಾ ಕುಡಿದು
ಜಾಮೂನು ತಿಂದು ಜಿರಲೆ ಕೊಂದು ಟಾಯ್ ಲೆಟ್ ಉಜ್ಜಿ
ಕಥೆಗೊಂದು ತಿರುವು ಬೇಕಾದರೆ ಉಂಗುರ ತೊಡಿಸಿ ನೀಲಿ ಹಾಕಿ
ನೆಕ್ಲೆಸ್ ತೊಟ್ಟು ಶೇವ್ ಮಾಡಿ ಪೂರಿ ಕರಿದು ಕಾರು ಹತ್ತಿ
ಚೆಂಡೆಸೆಯಲು ಅವನು ಓಡಿಬರುವಲ್ಲಿ ಪರ್ ಫ್ಯೂಮ್ ಸಿಂಪಡಿಸಿಕೊಂಡು
ಔಟಾಯಿತೇ ಎಂದು ತಿಳಿಯುವಲ್ಲಿ ಸೋಡಾ ಮಾತ್ರ ಕುಡಿದು
ಕಣ್ಣಿದ್ದ ಮೇಲೆ ಎಲ್ಲವನ್ನೂ ನೋಡಬೇಕು
ಕಿವಿಯಿದ್ದ ಮೇಲೆ ಎಲ್ಲವನ್ನೂ ಕೇಳಿಸಿಕೊಳ್ಳಬೇಕು
ಬಾಯಿಯಿದ್ದ ಮೇಲೆ ....
ಇಲ್ಲಿ ಎಲ್ಲದಕ್ಕೂ ಪ್ರಾಸ ನಡೆಯುವುದಿಲ್ಲ
ಬ್ರೇಕ್ ಇದ್ದಾಗ ಮಾತ್ರ ಮಾತನಾಡಿಕೊಂಡು
ಬೈಟ್ ದಾಟಿ ಪ್ರೋಮೋ ನೂಕಿ ಜಿಂಗಲ್ ಜೀಕಿ
ಮಜ್ಜಿಗೆ ಹುಳಿಗೆ ಜಿಲೇಬಿ ನೆಂಚಿಕೊಂಡು
ಒಂದು ತುತ್ತಿಗಾಗಿ ಹಲವು ತುತ್ತು ನಿವಾಳಿಸಿ
ಸರಗುಣಿಕೆಯ ದಾರಿಯಲ್ಲಿ ಅಡ್ಡಾದಿಡ್ಡಿ ನಡೆದು
ಚೂರು ಸಿನಿಮಾ ಚೂರು ಆಟ ಚೂರು ಡ್ಯಾನ್ಸು ಚೂರು ಹಾಡು
ಅರ್ಧಗೊಳ್ಳುವ ಕಾಲದಲ್ಲಿ ಪೂರ್ಣವೆಂಬ ಸಂಕೋಚ
ಪಾಲಾದ ಪಂಚೇಂದ್ರಿಯಗಳಿಗೆ ಏಕತೆಯ ಉಬ್ಬಸ
ಮಹಾಪೂರದ ಸೆಳೆತದಲ್ಲೂ ದೈನಿಕದ ದೊರಗು
ಹಂಚಿಹೋದ ಕಥೆಗಳಲ್ಲಿ ಸರಿದ ನೋವಿನೆಳೆಯು
ಸಾಗುತ್ತ ಸಾಗುತ್ತ ಯಾಕೋ ಎಲ್ಲವೂ ಸ್ತಬ್ಧ ಮಾತಿನ ಗಮಲಲ್ಲಿ
ಕೇಳುವವರು ಯಾರೂ ಇಲ್ಲ ಮನೆಯೊಳಗೆ ಎಂಬ ಅನುಮಾನದಲ್ಲಿ
ದಿನದ ದೇಖಾವೆಗೆ ನೂಕು ನುಗ್ಗಲ ಮನಸು ಒಳ ಮನಸು
ಇಲ್ಲದಿರುವಂತೆಯೂ ಇಷ್ಟು ನಡೆವುದು ಯಾರಿಗಾಗಿ
ಇದ್ದಂತೆಯೂ ಇಷ್ಟು ಮರೆತುದು ಯಾಕಾಗಿ ?
ಪುರಸೊತ್ತಿಲ್ಲ
ಅಲ್ಲೇನಾಗುತ್ತಿದೆಯೋ ಮೇಲೆ ಮೇಲೆ ಓಡಿ
ಇಲ್ಲೇನು ಮುಗಿಯಿತೋ ಕೆಳ ಕೆಳಗೆ ಧಾವಿಸಿ
ಸ್ವಲ್ಪ ಅದಕು ಕೊಂಚ ಇದಕು ಅಷ್ಟು ಎದಕು
ಒಂದು ತುಟಿ ಅಳುವಿಗಿಟ್ಟು ಇನ್ನೊಂದು ತುಟಿ ನಗುವಿಗಿಟ್ಟು
ಎಲ್ಲರ ಅಚ್ಚರಿ ಮ್ಯೂಟ್ ಮಾಡಿ ಮುಂದೆ ಸಾಗುತ್ತಿರಲು
ರೀಚಾರ್ಜ್ ಮಾಡಿಸಬೇಕು
ಅಸಹನೆಯಿಂದ ಕೂಗುತ್ತಿದೆ ಮೊಮ್ಮಗು ಒಂದೇ ಉಸಿರಲ್ಲಿ
ತಂತು ಕಡಿದಕೂಡಲೇ
ತಂತು ಸೇರಿಸಲು ತವಕಿಸುವ ಮಕ್ಕಳು
ಈ ಕರುಳಿಗೆ ಇಷ್ಟು ಸಾಕು
ಉಳಿದುದು ಮುಂದಿನ ಭಾಗದಲ್ಲಿ
ಇನ್ನೂ ಉಳಿದರೆ ಮುಂದಿನ ಕವಿತೆಯಲ್ಲಿ
ಮತ್ತೂ ಉಳಿದರೆ ಹೋಗಲಿ ಬಿಡಿ
ವ್ಯಕ್ತಿಗಳು ಬದಲಾಗಬಹುದು ಪಾತ್ರ ಬದಲಾಗುವುದಿಲ್ಲ
ಕವಿಗಳು ಬದಲಾಗಬಹುದು ಕವಿತೆ ಬದಲಾಗುವುದಿಲ್ಲ
ಇಲ್ಲಿ ಕವಿತೆ ಯಾಕೆ ಬಂತು ?
ಗೊತ್ತಿಲ್ಲ,ಜಾಗವಿಲ್ಲದ ಕಾಲದಲ್ಲಿ ಹೇಗೋ ತೂರಬೇಕು
ಇರಲಿ ಬಿಡಿ , ಒಂದು ಸೂಚನೆ
ಈ ಕವಿತೆಯ ಮೊದಲ ಮೂರು ಸಾಲಿನ ಪ್ರಾಯೋಜನೆಗೆ
ಕೊನೆಯ ಮೂರು ಸಾಲು ಬೋನಸ್ಸು
-ಜಿ.ಕೆ. ರವೀಂದ್ರಕುಮಾರ್
Comments