ಕದವಿಲ್ಲದ ಊರಲ್ಲಿ
- ಜಿ.ಕೆ.ರವೀಂದ್ರಕುಮಾರ್
- Oct 9, 2024
- 1 min read
ಒಂದು
ಬೆಳಗೆಂಬುದು ಒಂದು ಬೆರಗು
ಇರುಳೆಂಬುದು ನಿನ್ನೆಯ ಬೆರಗು
ಕರೆದರೂ ಸರಿವ
ಕರೆಯದಿದ್ದರೂ ಬರುವ
ಹೊತ್ತುಗಳ ಹರಿದಾಟದಲಿ
ಬೆಳಗೆಂದರೆ ಕಣ್ಣು
ತೊಳೆಸುವ ಅಮ್ಮ
ಇರುಳೆಂದರೆ ಲಾಲಿ
ತೂಗುವ ಅಮ್ಮ
ತೊಳೆಸುತ್ತ ತೂಗುತ್ತ ಕಾಪಿಡುವ ತಾಯಿಗೆ
ಕೂಸು ಮಲಗಿದರೆ ಇರುಳು
ಕೂಸು ಎದ್ದರೆ ಬೆಳಗು
ಹರಿವ ಹೊತ್ತಿಗೆ ತಾಯಿಯೆ ಒಂದು ಬೆರಗು
ಎರಡು
ಬೆಳಗಿನ ಮೌನಗಳು ಒಂದು ಬೆರಗು
ಇರುಳಿನ ಸದ್ದುಗಳು ಒಂದು ಬೆರಗು
ಕರೆದರು ಸರಿವ
ಕರೆಯದಿದ್ದರೂ ಬರುವ
ದಿನಮಾನದ ವಹಿವಾಟಿನಲಿ
ಬೆಳಗೆಂದರೆ ಕಣ್ಣೀರು
ನೇವರಿಸುವ ಅಪ್ಪ
ಇರುಳೆಂದರೂ ಕಣ್ಣೀರು
ಬೆನ್ನಿಡುವ ಅಪ್ಪ
ನೇವರಿಸಿ ಬೆನ್ನಿಟ್ಟು ಕಾಪಿಡುವ ತಂದೆಗೆ
ಯಾಕೆನ್ನುವ ಹೆಂಡತಿಯೇ ಇರುಳು
ಯಾಕೆನ್ನದ ಹೆಂಡತಿಯೇ ಬೆಳಗು
ಹರಿವ ಹೊತ್ತಿಗೆ ತಂದೆಯೇ ಒಂದು ಬೆರಗು
ಮೂರು
ಬೆಳಗಿನ ಅನುಮಾನ ಒಂದು ಬೆರಗು
ಇರುಳ ಅವಮಾನ ಒಂದು ಬೆರಗು
ಕರೆದರೂ ಬರುವ
ಕರೆಯದಿದ್ದರೂ ಬರುವ
ತಲ್ಲಣಗಳ ಸಂತೆಯಲಿ
ಬೆಳಗೆಂದರೆ ಉಪವಾಸ
ಎಡತಾಕುವ ಮಕ್ಕಳು
ಇರುಳೆಂದರೆ ಸಂಕಟ
ಹೊರಳಾಡುವ ಮಕ್ಕಳು
ಎಡತಾಕಿ ಹೊರಳಾಡಿ ದಿನದೂಡುವ ಮಕ್ಕಳಿಗೆ
ಒಲೆಯುರಿದರೆ ಬೆಳಗು
ಒಲೆಯಾರಿದರೆ ಇರುಳು
ಹರಿವ ಹೊತ್ತಿಗೆ ಹಸಿವೆಯೇ ಒಂದು ಬೆರಗು
ನಾಲ್ಕು
ಬೆಳಗು ಬಂದುದೇ ಒಂದು ಬೆರಗು
ಇರುಳು ಹೋದುದೇ ಒಂದು ಬೆರಗು
ಕರೆದರೂ ಸರಿವ
ಕರೆಯದಿದ್ದರೂ ಬರುವ
ನಿಂತವರ ಮುಂದಿನ ಯಾನದಲಿ
ಬೆಳಗೆಂದರೆ ಬೇಡಿಕೊಳ್ಳುವ ಸೆರಗು
ಇರುಳೆಂದರೆ ನುಂಗಿಕೊಳ್ಳುವ ಕರುಳು
ನುಂಗುತ್ತ ಬೇಡುತ್ತ ತಳ್ಳಿಕೊಳ್ಳುವ ಜೀವಕ್ಕೆ
ಹರಿದುಕೊಂಡರೆ ಇರುಳು
ಹೊಲೆದುಕೊಂಡರೆ ಬೆಳಗು
ಕದವಿಲ್ಲದ ಊರಲ್ಲಿ ಬದುಕ ಹಿಡಿವುದೇ ಒಂದು ಬೆರಗು
-ಜಿ.ಕೆ. ರವೀಂದ್ರಕುಮಾರ್
Commentaires