top of page
Search

ಒಂದು ಪುಟ್ಟ ಆಕಳಿಕೆ

  • ಜಿ.ಕೆ.ರವೀಂದ್ರಕುಮಾರ್
  • Sep 10, 2023
  • 1 min read

(೨೦೧೭ ರ ವಿಂಬಲ್ಡನ್ ಟೆನಿಸ್ ಪಂದ್ಯಾವಳಿಯ ಮೊದಲ ಸುತ್ತಿನಲ್ಲಿ ಸೋತ ಆಸ್ಟ್ರೇಲಿಯಾದ ಪ್ರತಿಭಾವಂತ

ಯುವ ಆಟಗಾರ ಬರ್ನಾರ್ಡ್ ಟಾಮಿಕ್ ಹೇಳಿದ್ದು ’ ಏನೂ ವಿಶೇಷವಿಲ್ಲ, ಆಡೋದು ಬೋರ್ ಅನಿಸಿತು, ಸೋತೆ.

ಎಲ್ಲಾ ಒಂದೇ ಥರ, ಮೋಟಿವೇಶನ್ನೇ ಇಲ್ಲ’ )


ಗಂಟೆ ಜಾಗಟೆ ಘೋಷದುನ್ಮೀಲ ಭಕ್ತಗಣ ಮಗ್ನತೆಯಲ್ಲಿ

ಹಿಡಿದ ಹಲಗಾರತಿಯ ಆವರ್ತದ ನಡುವೆ ಒಂದು ಪುಟ್ಟ ಆಕಳಿಕೆ


ಮೆಲುಮಾತು ಮೇಲುಸಿರು ಅಧರ ತೇವದೊತ್ತಿನ ಕೂಡ

ತೆಕ್ಕೆಯೊಳ ಹೊಕ್ಕ ಒಳಬೆಡಗ ತುಡಿವಲ್ಲಿ ಒಂದು ಪುಟ್ಟ ಆಕಳಿಕೆ


ಹೆಜ್ಜೆ ಗೆಜ್ಜೆ ಜತಿ ಭಾವ ಲಾಸ್ಯದೊನಪಿನ ನಡುವೆ

ಕಳೆದ ನೀಲಾಂಜನೆಯ ಸೊಬಗಲ್ಲೂ ಬಂದ ಪುಟ್ಟ ಆಕಳಿಕೆ


ಸ್ವರ ತಾನ ನಾದ ಲಯ ಗಾನ ಗಾಂಧಾರ ನಡೆಯ ಜೊತೆ

ಭಾವ ನೌಕೆಯ ತೇಲು ಅಮೃತವಾಹಿನಿಯಲ್ಲಿ ಒಂದು ಪುಟ್ಟ ಆಕಳಿಕೆ


ನಾಡಿ ಮೀಟು ಚಕ್ರ ಸುತ್ತು ಹರಿವ ಪ್ರಾಣದುಯ್ಯಾಲೆ ಚಿತ್ತದಲ್ಲಿ

ಕಂಡ ಮಣಿಪುರಿಯ ಹಿಡಿವ ತವಕದ ನಡುವೆ ಒಂದು ಪುಟ್ಟ ಆಕಳಿಕೆ

|

ಆಟ ಮುಗಿವನಕ ಆಕಳಿಕೆಯು ಯಾಕೆ? ಗುರುವತ್ತ ಬಾಣ

ಮುಗಿದಾದ ಮೇಲೂ ಮುಗಿವನಕ ನಟಿಸುವುದು ಈ ಜಗದ ಯಾನ


ಯಾನವೆಂಬುದು ಯಾಕೆ ಯಾನ ಬೇಡದ ಮೇಲೆ ಮತ್ತೊಂದು ಬಾಣ

ಇರದುದರಲ್ಲು ಇರವ ಕಾಣುವವರೆಗೆ ಇದ್ದೀತು ಕಾಲಮಾನ


ಯಾಕಿಂಥ ಕನವರಿಕೆ ವ್ಯರ್ಥ ಸರಗುಣಿಕೆ ಮತ್ತೆ ಬಿಟ್ಟ ಬಾಣ

ಆಕಳಿಕೆ ಬಂದಾಗ ಆಕಳಿಸದಿರುವುದೇ ಲೋಕ ಜೀವಯಾನ


ಗುರುವಿಗೂ ಬಂದ ಆಕಳಿಕೆ ಕಂಪಿಸಿದ ಶಿಷ್ಯನ ಕಣ್ಣಲ್ಲೇ ಬಾಣ

ಬಂದುದು ಹೋಗಲೇಬೇಕು ನಡೆ ನಿಂದಲ್ಲಿ ನಿಲದಿರುವುದೇ ಮಹಾಯಾನ


-ಜಿ.ಕೆ.ರವೀಂದ್ರಕುಮಾರ್

 
 
 

Recent Posts

See All
ಚೂರು ಪಾರು ಚರಿತೆ

ಎಷ್ಟೇ  ಬಳಿ ಬಳಿದು ನೆಕ್ಕಿದರೂ ಅಷ್ಟಿಷ್ಟು ಉಳಿಯುವ ಸಾರು ತಟ್ಟೆಯಲ್ಲಿ ಎಷ್ಟೇ ಎಳೆದೆಳೆದು ಚೀಪಿದರೂ ಚೂರು ಪಾರು ಬೆರಳಿನಲ್ಲಿ ನಾಕಾರು ಇರುವೆಗಳಿಗೆ ವಾರಕ್ಕಾಗುವಷ್ಟು...

 
 
 
ಮರವನಪ್ಪಿದ ಬಳ್ಳಿ

ಮರವನಪ್ಪಿದ ಬಳ್ಳಿಯನ್ನುಯನ್ನು ಮರವೇ ಅಪ್ಪಿರಬಹುದು ಹಾಗೂ ಇರಬಹುದು ಹೀಗೂ ಇರಬಹುದು ಭಾಷೆಯಿಲ್ಲದ ಜೀವಗಳು ದಾವೆ ಹೂಡಲಾರವು   ಎದೆ ಕೊರಳು ಗಲ್ಲ, ಬೆನ್ನು ಆತುಕೊಳ್ಳುವ...

 
 
 
ಹಾಕಿ ಹಾಕಿ

ಒಂದು   ಹಾಲಲ್ಲಾದರೂ ಹಾಕಿ ನೀರಲ್ಲಾದರೂ ಹಾಕಿ ಮೊದಲು ಒಂದು ಗೋಲು ಹಾಕಿ   ಆಗ ಹೀಗಿರಲಿಲ್ಲ ಧ್ಯಾನವಿದ್ದ ಕಾಲದಲ್ಲಿ ಚಂದ್ರ ನಗುತ್ತಲೇ ಇದ್ದ   ಚಂದ್ರ ನಗದಿದ್ದರೇನು...

 
 
 

Comentários


©2021 by G K RAVEENDRAKUMAR. Proudly created with Wix.com

bottom of page