ಒಬ್ಬರ ಬಟ್ಟೆ ಬಿಚ್ಚುವುದು
- ಜಿ.ಕೆ.ರವೀಂದ್ರಕುಮಾರ್
- Jun 25, 2022
- 1 min read
ಒಬ್ಬರ ಬಟ್ಟೆ ಬಿಚ್ಚುವುದು
ಒಬ್ಬರ ಬಟ್ಟೆ ಬಿಚ್ಚುವುದು ಅವಮಾನ ಎಂದು ಮಾತ್ರ ತಿಳಿದವರು
ಸದಾ ಅದೇ ಕೆಲಸ ಮಾಡುತ್ತಾರೆ
ತಾವೂ ಬೆತ್ತಲಾದಂತೆ ಎಂದು ತಿಳಿಯುವರೆಗೆ
ಬೆತ್ತಲೆ ನಿಂತ ಮನುಷ್ಯನಿಗೆ ಬಟ್ಟೆ ತೊಡಿಸಲೂ ತಿಳಿಯದು
ಎಂದು ಮಾತ್ರ ತಿಳಿದವರು ಅದನ್ನು ಎಲ್ಲೆಡೆ ಹಂಚುತ್ತಾರೆ
ತಮ್ಮ ಮಾತೂ ಬೆತ್ತಲಾಗಿದೆ ಎಂದು ತಿಳಿಯುವರೆಗೆ
ಬೆತ್ತಲಾಗುವುದು ತಲೆಮಾರಿನ ಬಾಧೆ
ಬೆತ್ತಲು ಮಾಡುವುದು ತಲೆಮಾರಿನ ತೀಟೆ
ಅಲ್ಲೊಂದು ದೂರು ಪುಸ್ತಕ
ಅಲ್ಲಿ ಇನ್ನೊಮ್ಮೆ ಎಲ್ಲ ಸಂಭವಿಸಬೇಕು
ಕೇಳಿದ ಕರುಣೆಯಲಿ ತೇಲುತ್ತ
ನೋಡದ ಚಿತ್ರಗಳಲಿ ಮೀಯುತ್ತ
ಆಡಿದ ಮಾತುಗಳಲಿ ಈಸುತ್ತ
ದಾಟಿ ಪಶ್ಚಿಮವಾಹಿನಿ ಪೂರ್ವವಾಹಿನಿ
ನೂರುವಾಹಿನಿ
ಮರೆತುಬಿಟ್ಟಲ್ಲಿ ಜೀವನ ಉಳಿಸಿಕೊಳ್ಳಬಹುದು
ಇಲ್ಲವೇ ಚರ್ಮವನ್ನೂ ಬಿಚ್ಚಬೇಕಾದೀತು
ಸರಿ ಎಂದರೆ ನದಿಮೂಲ ಮುಚ್ಚಿ
ನದಿಯನ್ನು ಹರಿಯಬಿಟ್ಟಂತೆ
ಇಲ್ಲವೆಂದರೆ ನದಿಮೂಲ ತೆಗೆದು
ನದಿಯನ್ನು ಹರಿಯಗೊಡದಂತೆ
ನಾಗರಿಕತೆಗಳೆಲ್ಲ ನದಿ ತೀರದಲ್ಲಿ ಹುಟ್ಟಿವೆ
ಎಂದು ತಿಳಿದವರು
ನದಿಯು ಕಂಡಾಗಲೆಲ್ಲ ಮೀಯುತ್ತಿದ್ದಾರೆ
ದಡದಲ್ಲಿ ಕೂತ ಒಣ ಬಟ್ಟೆ ನೋಡಿಕೊಂಡು
ನಾಗರಿಕತೆಗಳು ಕಣ್ಮರೆಯಾದುದೂ ನದಿ ತೀರದಲ್ಲೇ
ಎಂದು ತಿಳಿದವರು
ಅಲ್ಲಿ ಇಲ್ಲಿ ಓಡಾಡಿಕೊಂಡಿದ್ದಾರೆ
Comments